ಕಠೋಪನಿಷತ್ತು : ಕೃಷ್ಣಯಜುರ್ವೇದದ ಕಾಠಕ ಶಾಖೆಗೆ ಸೇರಿದ ಇದು ಅತ್ಯಂತ ಪ್ರಸಿದ್ಧವೂ ಆದರಣೀಯವೂ ಆಗಿದೆ. ಪಾಶ್ಚಾತ್ಯ ಪಂಡಿತರು ಭಾರತೀಯ ಅಧ್ಯಾತ್ಮರಹಸ್ಯವನ್ನು ವಿವರಿಸುವಾಗ ಕಠೋಪನಿಷತ್ತನ್ನು ಪರಮಾದರ್ಶವಾಗಿ ಉಲ್ಲೇಖಿಸಿರುತ್ತಾರೆ. ಇದು ಸಾಮವೇದಕ್ಕೆ ಸೇರಿದುದೆಂದೂ ಅಥರ್ವಣ ಉಪನಿಷತ್ತೆಂದೂ ಬೇರೆ ಬೇರೆ ಮತಗಳಿದ್ದರೂ ಮುಕ್ತಿಕೋಪನಿಷತ್ತಿನಲ್ಲಿ ಕೊಟ್ಟಿರುವ ಕೃಷ್ಣ ಯಜುರ್ವೇದೀಯ ಉಪನಿಷತ್ತುಗಳ ಪಟ್ಟಿಯಲ್ಲಿ ಇದಕ್ಕೆ ಪ್ರಥಮ ಸ್ಥಾನವಿದೆ. ಇದನ್ನು ಒಳಗೊಂಡಿರುವ ಸಾಮವೇದದ ಅಥವಾ ಅಥರ್ವ ವೇದದ ಭಾಗಗಳು ಸಿಕ್ಕಿಲ್ಲ. ತೈತ್ತಿರೀಯ ಬ್ರಾಹ್ಮಣದಲ್ಲಿ ಬರುವ ನಚಿಕೇತನ ಕಥೆಯನ್ನು ಈ ಉಪನಿಷತ್ತಿನಲ್ಲಿ ರೋಮಾಂಚಕಾರಿಯಾಗಿ ನಿರೂಪಿಸಲಾಗಿದೆ. ಈ ಕಥೆಯ ಕುರುಹನ್ನು ಋಗ್ವೇದದ ಹತ್ತನೆಯ ಮಂಡಲದ 135ನೆಯ ಸೂಕ್ತದಲ್ಲಿ ಕಾಣಬಹುದು. ಅಲ್ಲಿ ಉಲ್ಲೇಖಿತನಾಗಿರುವ ಕುಮರನೇ ನಚಿಕೇತನೆಂದು ಸಾಯಣಾಚಾರ್ಯರ ಅಭಿಪ್ರಾಯ.

ಈ ಉಪನಿಷತ್ತಿನಲ್ಲಿ ಮೂರು ಮೂರು ವಲ್ಲಿಗಳನ್ನೊಳಗೊಂಡ ಎರಡು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ತಂದೆಯ ಆಜ್ಞೆಯಂತೆ ನಚಿಕೇತ ಯಮನಲ್ಲಿಗೆ ಹೋಗಿ ಅವನಿಗಾಗಿ ಮೂರು ದಿನಗಳು ಉಪವಾಸ ಮಾಡಿ ಅವನಿಂದ ಮೂರು ವರಗಳನ್ನು ಪಡೆದನೆಂದು ನಿರೂಪಿಸಲಾಗಿದೆ. ನಚಿಕೇತ ಮೊದಲನೆಯ ವರವಾಗಿ ತನ್ನ ವಿಷಯದಲ್ಲಿ ತಂದೆಯ ಪ್ರಸನ್ನತೆಯನ್ನು ಕೇಳಿದ. ಎರಡನೆಯ ವರ ಸ್ವರ್ಗಕ್ಕೆ ಸಾಧನವಾದ ಅಗ್ನಿವಿದ್ಯೆ, ಮೂರನೆಯದು ಆತ್ಮತತ್ತ್ವಕ್ಕೆ ಸಂಬಂಧಪಟ್ಟದ್ದು. ನಚಿಕೇತ ಆತ್ಮತತ್ತ್ವವನ್ನು ತಿಳಿದುಕೊಳ್ಳಲು ಯೋಗ್ಯನೋ ಅಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ಯಮ ನಾನಾ ವಿಧವಾದ ಭೋಗದ ಆಸೆಗಳಿಂದ ಪ್ರಲೋಭನಗಳನ್ನು ಒಡ್ಡಿದ. ಆದರೆ ನಚಿಕೇತ ಈ ಯಾವ ಸುಖಗಳನ್ನೂ ಬಂiÀÄಸಲಿಲ್ಲ.

ಎರಡನೆಯ ವಲ್ಲಿಯಲ್ಲಿ ನಚಿಕೇತ ಬ್ರಹ್ಮವಿದ್ಯೆಗೆ ಅಧಿಕಾರಿಯೆಂದು ಅರಿತು ಯಮ ಆತನಿಗೆ ಉಪದೇಶಮಾಡುತ್ತಾನೆ. (ಇದನ್ನು ಉಪದೇಶ ಮಾಡಿದ ಗುರುವೂ ತಿಳಿದುಕೊಳ್ಳುವ ಶಿಷ್ಯನೂ ಅದ್ಚುತ ವ್ಯಕ್ತಿಗಳೇ ಆಗಿದ್ದಾರೆ.) ಬ್ರಹ್ಮದ ವಾಚಕವೂ ಪ್ರತೀಕವೂ ಆದ ಪ್ರಣವದ ಮೂಲಕ ಬ್ರಹ್ಮದ ಸ್ವರೂಪವನ್ನು ಯಮ ಉಪದೇಶ ಮಾಡುತ್ತಾನೆ. ಪ್ರೇಯಸ್ಸನ್ನು ಬಂiÀÄಸಿ ಅವಿವೇಕಿ ಪುರುಷಾರ್ಥದಿಂದ ಚ್ಯುತನಾಗುತ್ತಾನೆ. ಧೀಮಂತ ಶ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ. ಆಗ ಅವನಿಗೆ ಪರಮಾತ್ಮ ಪ್ರಾಪ್ತಿಯಾಗುತ್ತದೆ. ನಿಷ್ಕಾಮರಾಗಿ ಆತ್ಮನನ್ನೇ ಬಂiÀÄಸುವವರಿಗೆ ಅವನು ಲಭಿಸುತ್ತಾನೆ. ಸದಾಚಾರ ಮತ್ತು ಇಂದ್ರಿಯನಿಗ್ರಹಗಳು ಆತ್ಮಪ್ರಾಪ್ತಿಗೆ ಆವಶ್ಯಕ-ಎಂಬ ಯಮನ ಉಪದೇಶದಿಂದ ವಲ್ಲಿ ಸಮಾಪ್ತವಾಗುತ್ತದೆ.
ಮೂರನೆಯ ವಲ್ಲಿಯಲ್ಲಿ ಶರೀರವೇ ರಥ, ಆತ್ಮನೇ ಒಡೆಯ ಅಂದರೆ ರಥಿ, ಬುದ್ಧಿ ಸಾರಥಿ, ಮನಸ್ಸು ಕಡಿವಾಣ, ಇಂದ್ರಿಯಗಳು ಕುದುರೆಗಳು, ಶಬ್ದಾದಿ ವಿಷಯಗಳು ಆ ಕುದುರೆಗಳು ಹೋಗುವ ರಸ್ತೆಗಳು ಎಂಬ ರೂಪಕ ಕಲ್ಪನೆಯಿಂದ ವಿವೇಕಿಗೆ ಮಾತ್ರ ಇಂದ್ರಿಯಗಳು ವಶವಾಗಿ ಆತ ಪರಮಪದವನ್ನು ಮುಟ್ಟುತ್ತಾನೆ-ಎಂದು ಹೇಳಲಾಗಿದೆ.

ಎರಡನೆಯ ಅಧ್ಯಾಯದ ಮೊದಲನೆಯ ವಲ್ಲಿಯಲ್ಲಿ ಅಂಗುಷ್ಟ ಮಾತ್ರ ಪ್ರಮಾಣದ ಪರಮಾತ್ಮನನ್ನು, ಅಮೃತತ್ತ್ವವನ್ನು ಬಂiÀÄಸುವ ಯಾವನೋ ಒಬ್ಬ ಧೀರ ಸ್ವಭಾವತಃ ಹೊರಗೆ ಹೋಗುವ ಇಂದ್ರಿಯಗಳನ್ನು ಆಂತರ್ಯಕ್ಕೆ ಹಿಂತಿರುಗಿಸಿ ಶುದ್ಧವಾದ ನೀರಿನಲ್ಲಿ ಶುದ್ಧವಾದ ನೀರನ್ನು ಚೆಲ್ಲಿದರೆ ಹೇಗೋ ಹಾಗೆ ನೋಡುವನೆಂದು ಬೋಧಿಸಲಾಗಿದೆ.

ಎರಡನೆಯ ವಲ್ಲಿಯಲ್ಲಿ ಬ್ರಹ್ಮನ ಅಂತರ್ಯಾಮಿತ್ವವನ್ನು ವಿಸ್ತಾರವಾಗಿ ಉಪದೇಶಿಸಲಾಗಿದೆ. ಸರ್ವವ್ಯಾಪಕನಾದ ಆತ್ಮನನ್ನು ಯಾರೂ ಮೀರಲಾಗುವುದಿಲ್ಲವೆಂದೂ ಅವನನ್ನು ತಿಳಿದರೆ ಶೋಕದಿಂದ ಮುಕ್ತಿಯೆಂದೂ ಮರಣಾನಂತರ ಮಾನವರು ಕರ್ಮಕ್ಕೆ ಮತ್ತು ಜ್ಞಾನಕ್ಕೆ ಅನುಸಾರವಾಗಿ ಗತಿಯನ್ನು ಹೊಂದುತ್ತಾರೆಂದೂ ಉಪದೇಶಿಸಲಾಗಿದೆ.

ಮೂರನೆಯ ವಲ್ಲಿಯಲ್ಲಿ ಸಂಸಾರಸ್ವರೂಪವನ್ನು ನಿಶ್ಚಯಿಸುವುದರ ಮೂಲಕ ಬ್ರಹ್ಮಸ್ವರೂಪವನ್ನು ನಿರ್ಧರಿಸಲಾಗಿದೆ. ಈ ಸಂಸಾರ ಸನಾತನವಾದ ಒಂದು ಅಶ್ವತ್ಥವೃಕ್ಷ. ಇದರ ಬೇರುಗಳು ಮೇಲೆ, ಟೊಂಗೆಗಳು ಕೆಳಗೆ ಬೆಳೆದಿವೆ. ಇದೇ ಶುದ್ದವಸ್ತು, ಇದೇ ಬ್ರಹ್ಮ. ಕಣ್ಣಿನಿಂದ ನೋಡಲಾಗದ ಬ್ರಹ್ಮನನ್ನು ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ ಮನನರೂಪವಾದ ಸಮ್ಯಗ್ದರ್ಶನದಿಂದ ತಿಳಿದುಕೊಳ್ಳಬಹುದು. ಸ್ಥಿರವಾದ ಇಂದ್ರಿಯ ಧಾರಣೆಯೇ ಯೋಗ ಎಂಬ ಸಂದೇಶವಿದೆ. ಈ ಉಪನಿಷತ್ತಿನಲ್ಲಿ ಜನನ ಮರಣಗಳ ರಹಸ್ಯವನ್ನು ಬೋಧಿಸಿರುವುದರಿಂದ ಈ ಆಖ್ಯಾನವನ್ನು ಕೇಳಿದವರಿಗೆ ಹೇಳಿದವರಿಗೆ ನಚಿಕೇತ ಹೊಂದಿದ ಬ್ರಹ್ಮಲೋಕ ಪ್ರಾಪ್ತಿಯಾಗುವುದೆಂದು ಫಲಶ್ರುತಿ ಇದೆ. (ನೋಡಿ-ಉಪನಿಷತ್ತುಗಳು)                                	(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ